ಗೊತ್ತು ಬಿಡು ಮಂಥರೆ!
ನಿನ್ನ ಸುಳ್ಳು ಕಥೆಗಳನ್ನು ಕೇಳುತ್ತಾ ನಿಂತರೆ
ಮೂಲ ರಾಮಾಯಣವೇ ಮರೆತುಹೋಗುವುದು ಖರೆ ಖರೆ!
ಅಸುರ ಅಪ್ಸರೆ ದುಂಧುಭಿ ನೀನು
ಬ್ರಹ್ಮವರದಿಂದ ನಿಕೃತಿ ಜೊತೆಗೂಡಿ
ರಾಮನ ಪಟ್ಟಾಭಿಷೇಕ ನಿಲ್ಲಿಸಲಿಲ್ಲವೇನು?
ಕೈಕೇಯಿಯ ಸದ್ಗತಿಯ ನಿಧಾನಿಸಲಿಲ್ಲವೇನು?
ಗೊತ್ತು ಬಿಡು ಮಂಥರೆ!
ನಿನ್ನ ಸುಳ್ಳು ಕಥೆಗಳನ್ನು ಕೇಳುತ್ತಾ ನಿಂತರೆ
ಮೂಲ ರಾಮಾಯಣವೇ ಮರೆತುಹೋಗುವುದು ಖರೆ ಖರೆ!
ಭರತನಮೇಲೆ ಸಂಶಯಿಸಿ ರಾಮನಿಗೆ ಪಟ್ಟ ಕಟ್ಟಿದ ನಿನ್ನ ಒಡತಿಯ ಒಡೆಯ
ಗೊತ್ತಿದ್ದರೂ ಭರತನ ಸದ್ಗುಣ, ಜನಪ್ರಿಯ ರಾಮನ ಬಿಡಗೊಡೆಯ!
ಅವನಿಗಿಲ್ಲದ ಕಕ್ಕುಲಾತಿ ಅವನ ಕುಡಿಯ ಮೇಲೆ ನಿನಗೇಕೆ ಮಂಥರೆ?
ಗೊತ್ತು ಬಿಡು ಮಂಥರೆ!
ನಿನ್ನ ಸುಳ್ಳು ಕಥೆಗಳನ್ನು ಕೇಳುತ್ತಾ ನಿಂತರೆ
ಮೂಲ ರಾಮಾಯಣವೇ ಮರೆತುಹೋಗುವುದು ಖರೆ ಖರೆ!
ದೋಷದೂರ ಸದ್ಗುಣಗಣ ಸಾಂದ್ರ
ಚತುರ್ವಿದ ಚಿತ್ತವೃತ್ತಿಗಳ ಸ್ವಾಮಿ
ನಿನ್ನ ಜೀವಯೋಗ್ಯತೆಯಂತೆ
ನಿನ್ನಲ್ಲಿ ಉತ್ಪ್ರೇಕ್ಷೆ ತಾಳಿದ ಆಸಾಮಿ!
ಮಗುವು ಒದ್ದರೆ ಜೀವನವಿಡೀ ದ್ವೇಷ ಸಾಧಿಸುವ
ನಿನ್ನಂತ ಜೀವಿಗಳ ನಾ ಕೆಳರಿಯೆ!
ಎಲ್ಲ ಬಲ್ಲ ಜಗದೊಡೆಯನ ಲೀಲೆಗಳ
ಹೇಳಲಂತೂ ನಾ ಅರಿಯೆ!
ಗೊತ್ತು ಬಿಡು ಮಂಥರೆ!
ನಿನ್ನ ಸುಳ್ಳು ಕಥೆಗಳನ್ನು ಕೇಳುತ್ತಾ ನಿಂತರೆ
ಮೂಲ ರಾಮಾಯಣವೇ ಮರೆತುಹೋಗುವುದು ಖರೆ ಖರೆ!
ಅಹುದಹುದು ರಾಮಾಯಣಕ್ಕೆ ನೀನೇ ಕಾರಣ
ಕರ್ತೃ ಹೃಷಿಕೇಶನ ನಗುವಿನ ಹೂರಣ
ನೀನು, ಕಾಕಸುರ, ವಾಲೀ ಮಾಡಿದ ಪ್ರಮಾದಗಳೇ
ದುಷ್ಟಸಂಹಾರಕ್ಕೆ ತಳಿರು ತೋರಣ
ಗೊತ್ತು ಬಿಡು ಮಂಥರೆ!
ನಿನ್ನ ಸುಳ್ಳು ಕಥೆಗಳನ್ನು ಕೇಳುತ್ತಾ ನಿಂತರೆ
ಮೂಲ ರಾಮಾಯಣವೇ ಮರೆತುಹೋಗುವುದು ಖರೆ ಖರೆ!
ನೀನೇ ಸಾಕಿದ ಕೈಕೇಯಿ ರಾಮ ರಾಜನಾದರೆ ತಪ್ಪೇನಿದೆ? ಎಂದಾಗ ಪೆದ್ದಿ!
ಮೂರ್ಖೆ! ಎಂದು ಜರಿದೆ
ರಾಮ ತೊಡೆಯಲ್ಲಿಟ್ಟ ಹಾವಿನ ಮರಿ, ಭರತ ಮತ್ತವನ ಹೆಂಡಂದಿರು ಬಿಟ್ಟಿ
ಕೂಳಿಗೆ ಬೀಳುವವರೆಂದು ಒದರಿದೆ
ಕೌಸಲ್ಯೆಯನ್ನು ಗಾಳಿಗೆ ಹಿಡಿದೆ, ಸವತಿಯಲ್ಲಿ ಹಗೆ ಮೆತ್ತಿದೆ
ಹದಿನಾಲ್ಕು ವರುಷ ವನವಾಸದ ಹುಳವನ್ನೂ ಬಿತ್ತಿದೆ
ಗೊತ್ತು ಬಿಡು ಮಂಥರೆ!
ನಿನ್ನ ಸುಳ್ಳು ಕಥೆಗಳನ್ನು ಕೇಳುತ್ತಾ ನಿಂತರೆ
ಮೂಲ ರಾಮಾಯಣವೇ ಮರೆತುಹೋಗುವುದು ಖರೆ ಖರೆ!
ಶತ್ರುಘ್ನ ನಿನ್ನನು ಕೊಲ್ಲಲು ಬಂದಾಗ ರಾಮನ ನೆನದು ಹಿಂಜರಿದ
ಸ್ತ್ರೀಹತ್ಯಾ ಪಾತಕಿಯನ್ನು ರಾಮ ಪರಿತ್ಯಜಿಸುವನೆಂದು ಹೆದರಿದ
ಸತ್ಯಸಂಕಲ್ಪನಾದ ರಾಮನ ಪಟ್ಟಾಭಿಷೇಕವನ್ನು ಮುಂದೂಡಿದೆ
ಆದರೆ ಅವನಮುಂದೆ ನಿನ್ನ ಆರ್ಭಟವೆಲ್ಲ ಬರಿದೆ ಬರಿದೆ
ಗೊತ್ತು ಬಿಡು ಮಂಥರೆ!
ನಿನ್ನ ಸುಳ್ಳು ಕಥೆಗಳನ್ನು ಕೇಳುತ್ತಾ ನಿಂತರೆ
ಮೂಲ ರಾಮಾಯಣವೇ ಮರೆತುಹೋಗುವುದು ಖರೆ ಖರೆ!