Wednesday, October 24, 2018

ಸ್ಪೂರ್ತಿ

ಯೋಜನಗಳ ದಾಟಿ ದಾಟಿ
ಸೇತುವೆಗಳ ಕೆಳಗೆ ಮೀಟಿ
ಚಿಮ್ಮುತ ತೋರ್ಪ ಚೀಲದೊಳಗೆ
ಹರಳಡಗಿಸುವ ತೊರೆಯೇ
​ನಿನಗೆಲ್ಲಿಂದ ಬಂತು ಸ್ಪೂರ್ತಿ?

ಇಳಿಜಾರಲ್ಲಿ ತೆವಳಿ ತೆವಳಿ
ಲತೆ ಪೊದೆಗಳ ಆಚೆ ತಳ್ಳಿ
ಕೊರಡುಗಳಲಿ ತೂತು ಕೊರೆದು
ತಮ ಹರಿಯುವ ತೊರೆಯೇ
​​ನಿನಗೆಲ್ಲಿಂದ ಬಂತು ಸ್ಪೂರ್ತಿ?

ನುಸಿಕಿನಲ್ಲೂ ನಿನ್ನ ಮೊರೆತ
ಬಿಸಿಲಿನಲ್ಲೂ ಸುಡುವ ಕೊರೆತ
ಇತಿ ಮಿತಿಗಳಿರುವ ಗಡಿಗೆ
ಗತಿಕಾಣಿಸಿದ ತೊರೆಯೇ
​​ನಿನಗೆಲ್ಲಿಂದ ಬಂತು ಸ್ಪೂರ್ತಿ?​

ಗುರುತ್ವಕ್ಕೆ ನೀ ಜರಿದೆ ಜರಿದೆ
ಝರಿ ಝರಿಗಳ ಜೊತೆಗೆ ಬೆರೆತೆ
ಭುವಿಯಂಚಿನ ಕುಂಚಗಳಿಂದ
ಹರವಿಕೊಂಡ ತೊರೆಯೇ
​​ನಿನಗೆಲ್ಲಿಂದ ಬಂತು ಸ್ಪೂರ್ತಿ?

ಜಿಗಿವೆ ಎಂದು ಮಾತು ಕೊಟ್ಟೆ
ಪೊರೆವ ಪವನ ತೇಲಿ ಬಿಟ್ಟ
ಉಳಿದ ವಜ್ರಗಳೊಡನೆ ನೀನು
ಧರೆಯಾಳವ ಅಳೆವೆ!
ತೊರೆಯೇ  ​ನಿನಗೆಲ್ಲಿಂದ ಬಂತು ಸ್ಪೂರ್ತಿ?

No comments: